ಕ್ರಿಕೆಟ್

ಆಧುನಿಕ ಕ್ರೀಡಾಲೋಕದಲ್ಲಿ ಅತ್ಯಂತ ಜನಪ್ರಿಯವಾದ ಕ್ರೀಡೆಗಳ ಪೈಕಿ ಕ್ರಿಕೆಟ್ ಕೂಡ ಒಂದು. ಭಾರತದ ಕ್ರೀಡಾಲೋಕದಲ್ಲಿನ ಪರಿಸ್ಥಿತಿಯನ್ನು ಗಮನಿಸಿದಾಗ ಕ್ರಿಕೆಟ್ ಒಂದೇ ಅತ್ಯಂತ ಜನಪ್ರಿಯವಾದ ಕ್ರೀಡೆ ಎನ್ನುವ ಭ್ರಮೆ ಹುಟ್ಟಿದರೂ ಜಾಗತಿಕ ಸನ್ನಿವೇಶದಲ್ಲಿ ಫುಟ್‍ಬಾಲ್, ಟೆನಿಸ್, ಬಾಕ್ಸಿಂಗ್, ಬ್ಯಾಸ್ಕೆಟ್‍ಬಾಲ್, ಕಾರ್ ರೇಸಿಂಗ್... ಮುಂತಾದ ಕ್ರೀಡೆಗಳು ಕೂಡ ಕ್ರಿಕೆಟ್‍ಗಿಂತ ಜನಪ್ರಿಯವಾಗಿವೆ. ಒಲಿಂಪಿಕ್ಸ್ ಕೂಡ ಇನ್ನೂ ಜೀವಂತವಾಗಿಯೇ ಇದೆ.

ಬ್ರಿಟಿಷರಿಂದ ಭಾರತಕ್ಕೆ ಕಾಲಿಟ್ಟ ಕ್ರಿಕೆಟ್‍ಗೆ ಸುಮಾರು ಏಳು ಶತಮಾನಗಳಿಗಿಂತ ದೀರ್ಘವಾದ ಇತಿಹಾಸವಿದೆ. ಮೂಲತಃ ಕ್ರಿಕೆಟ್ ಎಂಬ ಪದ ಹೇಗೆ ಉದ್ಭವವಾಯಿತು ಎನ್ನುವ ಬಗ್ಗೆ ಹಲವಾರು ಸಿದ್ಧಾಂತಗಳನ್ನು ಮಂಡಿಸಲಾಗಿದೆ. ಸ್ಯಾಕ್ಸನ್‍ನ ಕ್ರೈಸ್ ಅರ್ಥಾತ್ ಕೋಲು ಎಂಬ ಪದವೇ ಕ್ರಿಕೆಟ್ ಆಗಿ ಪರಿವರ್ತನೆಗೊಂಡಿತು ಎಂಬ ಮಾತಿದೆ. ಅದೇ ರೀತಿಯಲ್ಲಿ ಫ್ಲೆಮಿಷ್ ಭಾಷೆಯ ಕ್ರಿಕ್ (ಕೋಲು), ಫ್ರೆಂಚ್‍ನ ಕ್ರಿಕ್ವೆಟ್ (ಗುರಿಕಂಬ) ಪದಗಳು ಕೂಡ ಕ್ರಿಕೆಟ್ ಪದದ ಹುಟ್ಟಿಗೆ ಮೂಲವಾದವು ಎನ್ನಲಾಗುತ್ತದೆ.

ಒಂದು ಸಿದ್ಧಾಂತದ ಪ್ರಕಾರ ಕುರಿ ಕಾಯುವ ಶೆಫರ್ಡ್‍ಗಳು ಈ ರೀತಿಯ ಆಟವನ್ನು ಆಡಲು ಆರಂಭಿಸಿದರು. ಕೊಟ್ಟಿಗೆಯಿಂದ ಕುರಿಗಳನ್ನು ಹೊರ ಬಿಡುವ ಸ್ಥಳದಲ್ಲಿ ಇರುತ್ತಿದ್ದ ವಿಕೆಟ್ ಗೇಟ್ ಮುಂದೆ ಒಬ್ಬ ಶೆಫರ್ಡ್ ಬ್ಯಾಟ್‍ನಂತಹ ಪರಿಕರವೊಂದನ್ನು ಹಿಡಿದು ನಿಲ್ಲುತ್ತಿದ್ದ. ಮತ್ತೊಂದು ತುದಿಯಿಂದ ಮತ್ತೊಬ್ಬ ಶೆಫರ್ಡ್ ಗುಂಡಾದ ಕಲ್ಲು ಅಥವ ಇನ್ಯಾವುದೇ ಗಟ್ಟಿಯಾದ ವಸ್ತುವನ್ನು ಆತನತ್ತ ಎಸೆಯುತ್ತಿದ್ದ. ಇದು ಕ್ರಿಕೆಟ್‍ನ ಉಗಮ ಎನ್ನಲಾಗುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಚರ್ಚ್‍ಗಳ ಆವರಣದಲ್ಲಿ ಆಡುತ್ತಿದ್ದ ಒಂದು ಆಟ ಅಥವಾ ಕ್ಲಬ್ ಬಾಲ್ ಎನ್ನುವ ಆಟವು ಕ್ರಿಕೆಟ್ ಆಗಿ ಪರಿವರ್ತನೆಗೊಂಡಿತು. ಬ್ರಿಟನ್ನಿನ ಯುವರಾಜ ಎಡ್ವರ್ಡ್ ಮತ್ತು ಆತನ ಸ್ನೇಹಿತ ಪಿಯರ್ಸ್ ಗಾವೆಸ್ಟನ್ ಹದಿನಾಲ್ಕನೇ ಶತಮಾನದಲ್ಲಿ ಕ್ರಿಕೆಟ್ ಆಡಿದರು ಎನ್ನುವ ಬಗ್ಗೆ ಉಲ್ಲೇಖವಿದೆ. ಆದರೆ, ಕ್ರಿಕೆಟ್ ಪಂದ್ಯವೊಂದು ನಡೆದದ್ದನ್ನು ದಾಖಲು ಮಾಡಿಕೊಂಡ ಪ್ರಥಮ ಉದಾಹರಣೆ ಸಿಗುವುದು 1946ರಲ್ಲಿ ಕೆಂಟ್‍ನ ಕಾಕ್ಸ್‍ಹೀತ್‍ನಲ್ಲಿ ನಡೆದ ಪಂದ್ಯದ ಮೂಲಕ. 1709ರ ಜೂನ್ 29 ರಂದು ಡಾರ್ಟ್‍ಫೋರ್ಡ್ ಬ್ರೆಂಟ್‍ನಲ್ಲಿ ಸರ್ರೆ ಮತ್ತು ಕೆಂಟ್ ತಂಡಗಳ ನಡುವೆ ನಡೆದ ಪಂದ್ಯವು ಅಧಿಕೃತವಾಗಿ ಎರಡು ದೇಶಗಳ ನಡುವೆ ನಡೆದ ಮೊದಲ ಕ್ರಿಕೆಟ್ ಪಂದ್ಯ ಎಂದು ದಾಖಲಾಗಿದೆ.

ಇಂಗ್ಲೆಂಡ್‍ನ ಹ್ಯಾಂಬಲ್‍ಡನ್ ಕ್ಲಬ್ ಅನ್ನು ಕ್ರಿಕೆಟ್‍ನ ತೊಟ್ಟಿಲು ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಕೆಂಟ್ ಇಂಗ್ಲೆಂಡ್‍ನ ಕ್ರಿಕೆಟ್ ಕ್ಲಬ್‍ಗಳ ಪೈಕಿಯೇ ಅತ್ಯಂತ ಶ್ರೇಷ್ಠವಾದುದು ಎಂಬ ಹೆಸರು ಕೂಡ ಪಡೆದಿತ್ತು. ಹ್ಯಾಂಬಲ್‍ಡನ್ ಕ್ರಿಕೆಟ್ ಕ್ಲಬ್ 1793ರಲ್ಲಿ ಲಂಡನ್‍ನ ಲಾಡ್ರ್ಸ್ ಮೈದಾನದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದುದಾಗಿ ತಿಳಿದುಬರುತ್ತದೆ. ಈ ಕ್ರಿಕೆಟ್ ಕ್ಲಬ್‍ನ ಆಟಗಾರರಾದ ಜಾನ್ ನೈರೆನ್ ಬರೆದ ಕ್ರಿಕೆಟರ್ಸ್ ಆಫ್ ಮೈ ಟೈಮ್ ಹಾಗೂ ಕೌಡನ್ ಕ್ಲಾರ್ಕ್ ಬರೆದ ದಿ ಯಂಗ್ ಕ್ರಿಕೆಟರ್ಸ್ ಟ್ಯೂಟರ್ ಎನ್ನುವ ಗ್ರಂಥಗಳು 1833ರಲ್ಲಿ ಪ್ರಕಟವಾಗಿವೆ.

ಈ ನಡುವೆ ದಿ ವೈಟ್ ಕಾಂಡ್ಯೂಟ್ ಕ್ಲಬ್ ಸದಸ್ಯರಿಗೆಂದು ಲಂಡನ್ ನಗರದ ನಡುವೆಯೇ ಲಾಡ್ರ್ಸ್ ಕ್ರಿಕೆಟ್ ಮೈದಾನ ಅಸ್ತಿತ್ವಕ್ಕೆ ಬಂತು. ಯಾರ್ಕ್‍ಷೈರ್‍ನ ಥಾಮಸ್ ಲಾರ್ಡ್ ಈ ಮೈದಾನವನ್ನು ನಿರ್ಮಿಸಿದ. ಲಾರ್ಡ್ ಈ ಮೈದಾನವನ್ನು ನಿರ್ಮಿಸಿದ್ದು ದಿ ವೈಟ್ ಕಾಂಡ್ಯೂಟ್ ಕ್ರಿಕೆಟ್ ಕ್ಲಬ್‍ನ ಸದಸ್ಯರು ಕ್ರಿಕೆಟ್ ಆಡುವ ಸಲುವಾಗಿ. 1787ರಲ್ಲಿ ಇದೇ ಮೈದಾನದಲ್ಲಿ ದಿ ವೈಟ್ ಕಾಂಡ್ಯೂಟ್ ಕ್ರಿಕೆಟ್ ಕ್ಲಬ್ ವಿಶ್ವವಿಖ್ಯಾತ ಮರಿಲಿಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಆಗಿ ಪರಿವರ್ತನೆಗೊಂಡಿತು. ಎಂಸಿಸಿ ಕ್ರಮೇಣ ಕ್ರಿಕೆಟ್‍ನ ನಿಯಮಗಳನ್ನು ರೂಪಿಸಿ, ಜಾಗತಿಕವಾಗಿ ಕ್ರಿಕೆಟ್‍ಗೆ ಒಂದು ಅಧಿಕೃತ ರೂಪ ನೀಡಿತು. ನಂತರ 1909ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ (ಈಗಿನ ಇಂಟರ್‍ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್- ಐಸಿಸಿ) ಅಸ್ತಿತ್ವಕ್ಕೆ ಬರುವವರೆಗೆ ಕ್ರಿಕೆಟ್ ಅನ್ನು ಆಳಿದ್ದು ಎಂಸಿಸಿ.

1909ರಲ್ಲಿ ಅಸ್ತಿತ್ವಕ್ಕೆ ಬಂದ ಇಂಪಿರಿಯಲ್ ಕ್ರಿಕೆಟ್ ಕಾನ್ಫರೆನ್ಸ್ 1965ರಲ್ಲಿ ಇಂಟರ್‍ನ್ಯಾಷನಲ್ ಕ್ರಿಕೆಟ್ ಕಾನ್ಫರೆನ್ಸ್ ಆಗಿ ಹೆಸರು ಬದಲಾಯಿತು. 1989ರಲ್ಲಿ ಅದು ಇಂಟರ್‍ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಆಗಿ ಪರಿವರ್ತನೆಗೊಂಡಿತು. ಅದರೊಂದಿಗೆ ಎಂಸಿಸಿಯಿಂದ ಸಂಪೂರ್ಣವಾಗಿ ಸ್ವತಂತ್ರವಾದ ಐಸಿಸಿ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‍ನ ಆಗು ಹೋಗುಗಳನ್ನು ನೋಡಿಕೊಳ್ಳುವ ಅಧಿಕೃತ ಸಂಸ್ಥೆಯಾಯಿತು.

ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ದೇಶಗಳು:
ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಬಾಂಗ್ಲಾದೇಶ. ಈ ಎಲ್ಲ ಹತ್ತು ದೇಶಗಳು ಟೆಸ್ಟ್ ಹಾಗೂ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅರ್ಹತೆ ಪಡೆದಿವೆ. ಉಳಿದಂತೆ ಐಸಿಸಿಯ ಸಹ ಸದಸ್ಯತ್ವ ಹಾಗೂ ಪೂರಕ ಸದಸ್ಯತ್ವ ಪಡೆದ ದೇಶಗಳು ಹಲವಾರು ಇವೆ. ಅವುಗಳಲ್ಲಿ ಸಹ ಸದಸ್ಯತ್ವ ಪಡೆದ ಕೆಲವು ದೇಶಗಳಿಗೆ ಮಾತ್ರ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಇದೆ.

ಕ್ರಿಕೆಟ್‍ನ ನಿಯಮಗಳು....

ಕ್ರಿಕೆಟ್ ಎರಡು ತಂಡಗಳ ನಡುವೆ ನಡೆಯುವ ಆಟ. ತಲಾ ಹನ್ನೊಂದು ಆಟಗಾರರನ್ನು ಒಳಗೊಂಡ ಎರಡು ತಂಡಗಳು ಹಸಿರು ತುಂಬಿದ ಮೈದಾನದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ರನ್ ಗಳಿಸಲು ಮತ್ತು ವಿಕೆಟ್ ಪಡೆಯಲು ನಡೆಸುವ ಹೋರಾಟವೇ ಕ್ರಿಕೆಟ್. ಈ ಕ್ರೀಡೆಯಲ್ಲಿ ಮೂಲ ನಿಯಮಗಳನ್ನು ರೂಪಿಸಿದ ಸಂಸ್ಥೆ ಎಂಸಿಸಿ. ಆ ಸಂಸ್ಥೆ ರೂಪಿಸಿದ 42 ನಿಯಮಗಳಿಗೆ ಅನುಗುಣವಾಗಿ ಈಗಲೂ ಕ್ರಿಕೆಟ್ ಆಟವನ್ನು ಆಡಲಾಗುತ್ತದೆ.

ಕ್ರಿಕೆಟ್ ಆಡುವ ಮೈದಾನದ ಸುತ್ತಳತೆಯ ಬಗ್ಗೆ ಯಾವುದೇ ನಿಖರವಾದ ನಿಯಮವಿಲ್ಲ. ಮೈದಾನದ ತ್ರಿಜ್ಯ ಯಾವುದೇ ಸಂದರ್ಭದಲ್ಲಿ 75 ಗಜಗಳಿಗಿಂತ ಹೆಚ್ಚು ಇರಕೂಡದು. ಸ್ಥಳದ ಅಭಾವ ಇದ್ದಲ್ಲಿ ತ್ರಿಜ್ಯ 5 ರಿಂದ 10 ಗಜ ಕಡಿಮೆ ಇರಲೂಬಹುದು. ಕ್ರಿಕೆಟ್ ಮೈದಾನ ವೃತ್ತಾಕಾರವಾಗಿಯೇ ಇರಬೇಕು ಎಂಬ ನಿಯಮವಿಲ್ಲ. ಅಂಡಾಕಾರವಾಗಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನಗಳು ಸಾಕಷ್ಟು ಇವೆ. ಕ್ರಿಕೆಟ್ ಆಡುವ ಮೈದಾನದ ಸುತ್ತ ಹಗ್ಗವನ್ನು ಬಳಸಿ ಹಾಕಲಾಗುವ ಬಿಳಿಯ ಗೆರೆಯನ್ನು ಬೌಂಡರಿ ಗೆರೆ ಎಂದು ಕರೆಯಲಾಗುತ್ತದೆ. ಇದು ಆಟವಾಡುವ ಪ್ರದೇಶದ ಅಂತಿಮ ಗಡಿಯಿದ್ದಂತೆ. ಉಳಿದಂತೆ ಮೈದಾನದ ನಡುವಿನ ಪಿಚ್, ಉಪಯೋಗಿಸುವ ಪರಿಕರಗಳಾದ ಬ್ಯಾಟ್, ಬಾಲ್ ಹಾಗೂ ವಿಕೆಟ್‍ಗಳ ಬಗ್ಗೆ ಖಚಿತ ನಿಯಮಗಳು ಇವೆ.

ಕ್ರಿಕೆಟ್‍ನ ನಿಯಮಗಳ ಪ್ರಕಾರ ಮೈದಾನದ ನಡುವೆ ಇರುವ ಪಿಚ್ 22 ಗಜ ಅಥವಾ 20.12 ಮೀಟರ್‍ನಷ್ಟು ಉದ್ದವಿರಬೇಕು. ಪಿಚ್‍ನ ಎರಡು ಬದಿಯ ಕೇಂದ್ರ ಭಾಗದಲ್ಲಿ ತಲಾ 28 ಇಂಚು ಉದ್ದವಿರುವ ಮೂರು, ಮೂರು ವಿಕೆಟ್‍ಗಳನ್ನು ಹುಗಿದಿರಬೇಕು. ಆ ವಿಕೆಟ್‍ಗಳು ನೆಲದ ಮಟ್ಟದಿಂದ ಸರಿಯಾಗಿ 28 ಇಂಚು ಎತ್ತರದಲ್ಲಿರಬೇಕು. ಪಿಚ್ ಲಭ್ಯವಿಲ್ಲದಿದ್ದಲ್ಲಿ ಕೃತಕವಾದ ಮ್ಯಾಟಿಂಗ್ ಪಿಚ್‍ನಲ್ಲಿ ಕೂಡ ಆಟವನ್ನು ಆಡಬಹುದು. ಕ್ರಿಕೆಟ್ ಆಡಲು ಬಳಸುವ ಬ್ಯಾಟ್ 38 ಇಂಚುಗಳಿಗಿಂತ ಹೆಚ್ಚು ಉದ್ದ ಹಾಗೂ 4.5 ಇಂಚುಗಳಿಗಿಂತ ಅಗಲ ಇರಕೂಡದು. ಆ ಬ್ಯಾಟ್ ಅನ್ನು ಮರದಿಂದಲೇ ಮಾಡಿರತಕ್ಕದ್ದು. ಮರದ ತೊಗಟೆಯ ಪುಡಿಯಿಂದ ಮಾಡಿರುವ ಕ್ರಿಕೆಟ್ ಬಾಲ್‍ಗೆ ಚರ್ಮದ ಹೊದಿಕೆ ಹಾಕಲಾಗುವುದು. ಆ ಚೆಂಡಿನ ತೂಕ 155.9 ಗ್ರಾಂಗಿಂತ ಕಡಿಮೆ ಇರಕೂಡದು. ಅದೇ ರೀತಿಯಲ್ಲಿ 163 ಗ್ರಾಂಗಿಂತ ಹೆಚ್ಚಿಗೆ ಇರಕೂಡದು. ಚೆಂಡಿನ ಸುತ್ತಳತೆ 22.4 ನಿಂದ 22.9 ಸೆ.ಮೀ.ಗಿಂತ ಒಳಗೆ ಇರಬೇಕು. ತಲಾ ಹನ್ನೊಂದು ಆಟಗಾರರಿರುವ ಎರಡು ತಂಡಗಳು ಕ್ರಿಕೆಟ್ ಆಡಬೇಕು. ಉಳಿದಂತೆ ಪಿಚ್‍ನ ಎರಡು ತುದಿಗಳಲ್ಲಿ ಕಾರ್ಯ ನಿರ್ವಹಿಸಲು ಇಬ್ಬರು ಅಂಪೈರ್‍ಗಳು ಹಾಗೂ ಒಬ್ಬ ಸ್ಕೋರರ್ ಯಾವುದೇ ಕ್ರಿಕೆಟ್ ಪಂದ್ಯದ ಅವಿಭಾಜ್ಯ ಅಂಗಗಳು. ಈ ಪೈಕಿ ಅಂಪೈರ್‍ಗಳು ಮೈದಾನದ ಒಳಗೆ ಪಂದ್ಯವನ್ನು ಸುಸೂತ್ರವಾಗಿ ನಡೆಸಿಕೊಡುವ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಮೈದಾನದ ಹೊರಗೆ ಬೌಂಡರಿ ಗೆರೆಯಾಚೆ ಕುಳಿತುಕೊಳ್ಳುವ ಸ್ಕೋರರ್ ಪಂದ್ಯದಲ್ಲಿನ ಪ್ರಮುಖ ಅಂಕಿ ಅಂಶಗಳ ದಾಖಲೆಯನ್ನು ಇಟ್ಟುಕೊಳ್ಳುತ್ತಾರೆ.

	ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಈಗ ಮೂರು (ಟಿವಿ ಅಂಪೈರ್) ಹಾಗೂ ನಾಲ್ಕನೇ ಅಂಪೈರ್‍ಗಳೂ ಇರುತ್ತಾರೆ. ಐಸಿಸಿ ನೇಮಕ ಮಾಡಿದ ಮ್ಯಾಚ್ ರೆಫರಿ ಒಟ್ಟಾರೆ ಪಂದ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ.
ಕ್ರಿಕೆಟ್‍ನ ನಿಯಮಗಳ ಪ್ರಕಾರ ಒಂದು ಪಂದ್ಯದಲ್ಲಿ ಮೊದಲೇ ನಿಗದಿಯಾದಂತೆ ಎರಡೂ ತಂಡಗಳು ತಲಾ ಎರಡು ಇನಿಂಗ್ಸ್ ಆಡಬಹುದು. ಇಲ್ಲವಾದಲ್ಲಿ ತಲಾ ಒಂದು ಇನಿಂಗ್ಸ್ ಕೂಡ ಆಡಬಹುದು. ಎರಡು ಅಥವಾ ಒಂದು ಇನಿಂಗ್ಸ್. ಇವುಗಳಲ್ಲಿ ಏನನ್ನೇ ಆಡಿದರೂ, ಒಟ್ಟಾರೆ ಒಂದು ತಂಡವು ಗಳಿಸುವ ಒಟ್ಟು ರನ್‍ಗಳ ಸಂಖ್ಯೆಯು ಗೆಲುವು ಅಥವಾ ಸೋಲನ್ನು ನಿರ್ಣಯಿಸುತ್ತದೆ.

ಉದಾಹರಣೆಗೆ ಎರಡು ದೇಶಗಳ ತಂಡಗಳ ನಡುವೆ ನಡೆಯುವ ಟೆಸ್ಟ್ ಪಂದ್ಯಗಳನ್ನೇ ತೆಗೆದುಕೊಳ್ಳೋಣ. ಪಂದ್ಯ ಆರಂಭವಾಗುವ ಮೊದಲು ಉಭಯ ತಂಡಗಳ ನಾಯಕರು ಅಂತರರಾಷ್ಟ್ರೀಯ ಮ್ಯಾಚ್ ರೆಫರಿಯ ಸಮ್ಮುಖದಲ್ಲಿ ನಾಣ್ಯ ಚಿಮ್ಮುವ (ಟಾಸ್) ಮೂಲಕ ಯಾರು ಮೊದಲು ಬ್ಯಾಟ್ ಮಾಡಬೇಕು ಹಾಗೂ ಯಾರು ಫೀಲ್ಡಿಂಗ್ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಸಹಜವಾಗಿಯೇ ಟಾಸ್ ಗೆದ್ದ ನಾಯಕ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಾನೆ.

ಫೀಲ್ಡಿಂಗ್ ಮಾಡುವ ತಂಡದ ಎಲ್ಲ ಹನ್ನೊಂದು ಆಟಗಾರರು ಮೈದಾನಕ್ಕಿಳಿಯುತ್ತಾರೆ. ಬ್ಯಾಟಿಂಗ್ ಮಾಡುವ ತಂಡದ ಪೈಕಿ ಇಬ್ಬರು ಬ್ಯಾಟ್ಸ್‍ಮನ್‍ಗಳು ಬ್ಯಾಟ್ ಹಿಡಿದು ಮೈದಾನವನ್ನು ಪ್ರವೇಶಿಸುತ್ತಾರೆ. ಫೀಲ್ಡಿಂಗ್ ಮಾಡುವ ತಂಡದಲ್ಲಿರುವ ಬೌಲರ್ ಒಬ್ಬ ಚೆಂಡನ್ನು ಬೌಲ್ ಮಾಡುವ ಮೂಲಕ ಪಂದ್ಯ ಆರಂಭವಾಗುತ್ತದೆ. ಈಗ ಪ್ರತಿ ಓವರ್‍ಗೆ ಒಬ್ಬ ಬೌಲರ್ ಆರು ಬಾರಿ ಬೌಲ್ ಮಾಡಬಹುದು. ಹಿಂದೆ ಪ್ರತಿ ಓವರ್‍ಗೆ 4, 6 ಹಾಗೂ 8 ಬಾಲ್ ಮಾಡುವ ಅವಕಾಶ ಇತ್ತು. ಒಬ್ಬ ಬೌಲರ್ ಹೇಗೆ ಚೆಂಡನ್ನು ಎಸೆಯಬೇಕು ಎನ್ನುವ ಬಗ್ಗೆ ಕೂಡ ಖಚಿತವಾದ ನಿಯಮವಿದೆ. ಆ ನಿಯಮ ಮೀರಿದಲ್ಲಿ ನೋಬಾಲ್, ವೈಡ್ ಬಾಲ್ ಘೋಷಿಸಲು ಅಂಪೈರ್‍ಗಳಿಗೆ ಅವಕಾಶ ಇದೆ.

ಬೌಲರ್ ಬೌಲ್ ಮಾಡಿದ ಚೆಂಡನ್ನು ಬ್ಯಾಟ್ಸ್‍ಮನ್ ತನ್ನ ಬ್ಯಾಟ್‍ನಿಂದ ಬಾರಿಸಬೇಕು. ಆ ಯತ್ನದಲ್ಲಿ ಆತ ಯಶಸ್ವಿಯಾದರೆ ರನ್‍ಗಳಿಗಾಗಿ ಓಡಬಹುದು. ಎದುರಾಳಿ ತಂಡದ ಆಟಗಾರರು ನಿಂತಿರುವ ಸ್ಥಳಗಳಿಂದ ದೂರಕ್ಕೆ ಚೆಂಡನ್ನು ಬ್ಯಾಟ್‍ನಿಂದ ಬಾರಿಸಿ ಇಬ್ಬರೂ ಬ್ಯಾಟ್ಸ್‍ಮನ್‍ಗಳು ರನ್‍ಗಳಿಗಾಗಿ ಓಡಬಹುದು. ಅವರಿಬ್ಬರು ಎಷ್ಟು ಬಾರಿ ಪಿಚ್‍ನಲ್ಲಿ ಆಚೀಚೆ ಓಡುತ್ತಾರೆಯೋ ಅಷ್ಟನ್ನು ರನ್ ಎಂದು ಪರಿಗಣಿಸಲಾಗುತ್ತದೆ. ಈ ನಡುವೆ ಅವರು ಬಾರಿಸಿದ ಚೆಂಡು ವಿಕೆಟ್ ಬಳಿಗೆ ವಾಪಸು ಬರದೇ ಇರುವುದರತ್ತ ಬ್ಯಾಟ್ಸ್‍ಮನ್‍ಗಳು ಗಮನ ಹರಿಸಬೇಕು. ಕ್ಷೇತ್ರ ರಕ್ಷಣೆ ಮಾಡುತ್ತಿರುವ ಆಟಗಾರ ಚೆಂಡನ್ನು ವಶಪಡಿಸಿಕೊಂಡು ವಿಕೆಟ್‍ನ ಕಡೆ ಎಸೆಯುವಷ್ಟರಲ್ಲಿ ಬ್ಯಾಟ್ಸ್‍ಮನ್‍ಗಳು ಬ್ಯಾಟಿಂಗ್ ಕ್ರೀಸ್‍ನ ಒಳಗೆ ವಾಪಸು ಬಂದಿರಬೇಕು. ವಾಪಸು ತಲುಪದೇ ಇರುವ ಸಂದರ್ಭದಲ್ಲಿ ಎದುರಾಳಿ ತಂಡದ ಯಾವುದೇ ಆಟಗಾರ ಚೆಂಡಿನ ಸಹಾಯದಿಂದ ವಿಕೆಟ್ ಅಥವಾ ವಿಕೆಟ್‍ಗಳನ್ನು ಚದುರಿಸಿದರೆ ಬ್ಯಾಟ್ಸ್‍ಮನ್ ರನೌಟ್ ಆಗುತ್ತಾನೆ. ಇದು ಬ್ಯಾಟ್ಸ್‍ಮನ್ ಔಟ್ ಆಗುವ ಒಂದು ಪರಿ.

ಬೌಲ್ ಮಾಡಿದ ಚೆಂಡು ಬ್ಯಾಟ್‍ಗೆ ತಾಗದೇ ನೇರವಾಗಿ ಬ್ಯಾಟ್ಸ್‍ಮನ್ ಹಿಂದಿರುವ ವಿಕೆಟ್‍ಗಳನ್ನು ಚದುರಿಸಿದರೆ ಆತ ಬೌಲ್ಡ್ ಆಗುವ ಮೂಲಕ ಮೈದಾನದಿಂದ ಹೊರ ನಡೆಯಬೇಕಾಗುತ್ತದೆ. ನೇರವಾಗಿ ಬಂದ ಚೆಂಡು ವಿಕೆಟ್‍ಗಳ ಮುಂಬದಿಯಲ್ಲಿ ನಿಂತಿರುವ ಬ್ಯಾಟ್ಸ್‍ಮನ್ ಕಾಲಿಗೆ ಬಡಿದರೆ ಲೆಗ್ ಬಿಫೋರ್ ವಿಕೆಟ್ (ಎಲ್.ಬಿ.ಡಬ್ಲ್ಯು) ಆಗಿ ಔಟಾಗುತ್ತಾನೆ.

ಇನ್ನು ಬ್ಯಾಟ್‍ನಿಂದ ಹೊಡೆದ ಚೆಂಡನ್ನು ನೆಲಕ್ಕೆ ತಾಗುವ ಮೊದಲೇ ಕ್ಷೇತ್ರ ರಕ್ಷಣೆ ಮಾಡುತ್ತಿರುವ 11 ಆಟಗಾರರ ಪೈಕಿ ಯಾರಾದರೂ ಹಿಡಿದರೆ ಕೂಡ ಬ್ಯಾಟ್ಸ್‍ಮನ್ ಔಟಾಗುತ್ತಾನೆ. ಇದಲ್ಲದೇ ಬೌಲ್ ಮಾಡಿದ ಚೆಂಡನ್ನು ಕೈಯಿಂದ ಹಿಡಿದಲ್ಲಿ ಕೂಡ ಹ್ಯಾಂಡ್ಲಿಂಗ್ ದಿ ಬಾಲ್ ನಿಯಮದಡಿ ಬ್ಯಾಟ್ಸ್‍ಮನ್‍ನನ್ನು ಔಟ್ ಎಂದು ಘೋಷಿಸಲಾಗುತ್ತದೆ.

ಮೇಲಿನ ಯಾವುದೇ ನಿಯಮಗಳನ್ನು ಮುರಿಯದೇ ಬ್ಯಾಟ್‍ನಿಂದ ಚೆಂಡನ್ನು ಬಾರಿಸುತ್ತ ರನ್‍ಗಳಿಸುವ ಚಾಣಾಕ್ಷತೆಯನ್ನು ಬ್ಯಾಟ್ಸ್‍ಮನ್‍ಗಳು ತೋರುವುದೇ ಆಟದ ಹಿರಿಮೆ. ಬ್ಯಾಟ್‍ನಿಂದ ಚಿಮ್ಮಿದ ಚೆಂಡು ಯಾರ ಕೈಗೂ ಸಿಗದೇ ಬೌಂಡರಿ ಗೆರೆಯೊಳಗೆ ನೆಲಕ್ಕೆ ಬಿದ್ದು ಅದನ್ನು ದಾಟಿದರೆ ನಾಲ್ಕು ರನ್‍ಗಳು ದಕ್ಕುತ್ತವೆ. ನೆಲಕ್ಕೆ ತಾಗದೇ ನೇರವಾಗಿ ಬೌಂಡರಿ ಗೆರೆಯಾಚೆ ಹೋಗಿ ಬಿದ್ದರೆ ಸಿಕ್ಸರ್ ಅರ್ಥಾತ್ ಆರು ರನ್‍ಗಳು ಲಭ್ಯವಾಗುತ್ತದೆ. ಒಂದೆಡೆ ಪ್ರತಿಯೊಬ್ಬ ಬ್ಯಾಟ್ಸ್‍ಮನ್ ಗಳಿಸಿದ ರನ್‍ಗಳು ಆತನ ವೈಯಕ್ತಿಕ ಖಾತೆಗೆ ಜಮಾ ಆಗುತ್ತದೆ. ಜೊತೆಯಲ್ಲಿಯೇ ಆ ರನ್‍ಗಳು ತಂಡದ ಖಾತೆಗೂ ಜಮಾ ಆಗುತ್ತವೆ. ಬ್ಯಾಟ್ಸ್‍ಮನ್ ಗಳಿಸಿದ ರನ್‍ಗಳಲ್ಲದೇ ನಿಯಮ ಮೀರಿದ ಪರಿಣಾಮವಾಗಿ ದೊರಕುವ ವೈಡ್, ನೋಬಾಲ್, ಬೈ ಹಾಗೂ ಲೆಗ್ ಬೈ ಮೂಲಕ ಬರುವ ರನ್‍ಗಳೂ ತಂಡದ ಖಾತೆಗೆ ಸೇರಿಕೊಳ್ಳುತ್ತವೆ.

ಒಂದು ತಂಡದಲ್ಲಿರುವ ಹನ್ನೊಂದು ಆಟಗಾರ ಪೈಕಿ ಹತ್ತು ಆಟಗಾರರು ಔಟಾದರೆ ಅವರ ಇನಿಂಗ್ಸ್ (ಪಾಳಿ) ಮುಗಿದಂತೆ. ಇನಿಂಗ್ಸ್ ಮುಗಿದ ಕೂಡಲೇ ಸ್ಕೋರರ್ ಆ ತಂಡವು ಎಷ್ಟು ರನ್‍ಗಳಿಸಿದೆ ಎನ್ನುವುದನ್ನು ಅಧಿಕೃತವಾಗಿ ಸಾರುತ್ತಾರೆ. ನಂತರ ಕ್ಷೇತ್ರ ರಕ್ಷಣೆ ಮಾಡಿದ ತಂಡವು ಬ್ಯಾಟಿಂಗ್ ಆರಂಭಿಸಬೇಕಾಗುತ್ತದೆ. ಮೊದಲು ಬ್ಯಾಟ್ ಮಾಡಿದ ತಂಡವು 250 ರನ್‍ಗಳಿಸಿದ್ದರೆ ಎರಡನೇ ಬಾರಿ ಬ್ಯಾಟಿಂಗ್‍ಗೆ ಇಳಿಯುವ ತಂಡವು ಅದಕ್ಕಿಂತ ಹೆಚ್ಚು ರನ್‍ಗಳಿಸಿದರೆ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ. ಇಲ್ಲವಾದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಜಯಶಾಲಿಯಾಗುತ್ತದೆ. ಎರಡು ಇನಿಂಗ್ಸ್‍ಗಳ ಪಂದ್ಯವಾದರೂ ಒಟ್ಟು ಗಳಿಸಿದ ರನ್‍ಗಳ ಸಂಖ್ಯೆಯ ಆಧಾರದ ಮೇಲೆಯೇ ವಿಜಯೀ ತಂಡ ಯಾವುದು ಎಂದು ನಿರ್ಧಾರ ಮಾಡಲಾಗುತ್ತದೆ.
ಹೀಗೆ ಪಂದ್ಯ ನಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‍ಮನ್ ಔಟಾಗಲು ಕಾರಣವಾಗುವ ಬೌಲರ್‍ಗೆ ವಿಕೆಟ್ ಪಡೆದ ಗೌರವ ದೊರಕುತ್ತದೆ. ಬಹುದಿನ ಪಂದ್ಯಗಳಲ್ಲಾದರೆ ಒಬ್ಬ ಬೌಲರ್ ಎಷ್ಟು ಓವರ್‍ಗಳನ್ನಾದರೂ ಬೌಲ್ ಮಾಡಬಹುದು. ಆದರೆ, ನಿಗದಿತ ಓವರುಗಳ ಏಕದಿನ ಪಂದ್ಯಗಳಲ್ಲಿ ಒಬ್ಬ ಬೌಲರ್ ಗರಿಷ್ಠ ಇಂತಿಷ್ಟೇ ಓವರ್‍ಗಳನ್ನು ಬೌಲ್ ಮಾಡಬಹುದು ಎಂಬ ಮಿತಿಯಿರುತ್ತದೆ. ಇವಿಷ್ಟು ಕ್ರಿಕೆಟ್ ಆಡುವಾಗ ಅನುಸರಿಸಬೇಕಾದ ಪ್ರಮುಖ ನಿಯಮಗಳು. ಇದಲ್ಲದೇ ನೂರಾರು ಉಪ ನಿಯಮಗಳು ಕೂಡ ಕ್ರಿಕೆಟ್ ಆಟವನ್ನು ಉತ್ತಮವಾಗಿ ಆಡಲು ರೂಪಿಸಲಾಗಿದೆ.
ಸಭ್ಯರ ಕ್ರೀಡೆ ಎಂಬ ಖ್ಯಾತಿ ಪಡೆದಿರುವ ಕ್ರಿಕೆಟ್ ಅನ್ನು ಕೇವಲ ನಿಯಮಗಳಿಗೆ ಅನುಸಾರವಾಗಿ ಮಾತ್ರ ಆಡಬಾರದು, ಈ ಕ್ರೀಡೆಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಕೂಡ ಆಡಬೇಕು ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಶಿಸ್ತುಬದ್ಧವಾಗಿ, ನಿರ್ಮಲ ಮನಸ್ಸಿನಿಂದ, ಯಾವುದೇ ಮೋಸಕ್ಕೆ ಅವಕಾಶ ನೀಡದೆ, ಯಾವುದೇ ಅಹಿತಕರ ಘಟನೆಗಳಿಗೆ ದಾರಿ ಮಾಡಿಕೊಡದೇ ಕ್ರಿಕೆಟ್ ಅನ್ನು ಆಡಬೇಕು ಎಂದು ಪಂಡಿತರು ಹೇಳುತ್ತಾರೆ.

ಬೆಳೆದು ಬಂದ ಹಾದಿ:
ಮೂಲತಃ ಇಂಗ್ಲೆಂಡ್‍ನ ಕ್ಲಬ್‍ಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಗಳಿಗೆ ಅಂತರರಾಷ್ಟ್ರೀಯ ಸ್ವರೂಪ ಒದಗಿ ಬಂದದ್ದು 1877ರ ಮಾರ್ಚ್ 15 ರಂದು. ಜೆ.ಲಿಲ್ಲಿವೈಟ್ ನೇತೃತ್ವದ ಇಂಗ್ಲೆಂಡ್ ತಂಡವು ಆಗ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಪ್ರವಾಸಿ ತಂಡವು ಡಿ.ಡಬ್ಲ್ಯು. ಗ್ರೆಗರಿ ನೇತೃತ್ವದ ಆತಿಥೇಯ ಆಸ್ಟ್ರೇಲಿಯಾ ತಂಡದ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ವಿಶ್ವದ ಮೊದಲ ಅಧಿಕೃತ ಟೆಸ್ಟ್ ಪಂದ್ಯವನ್ನು ಆಡಿತು. ಆ ಪಂದ್ಯದಲ್ಲಿ ಕ್ರಿಕೆಟ್‍ನ ಪಿತಾಮಹ ಇಂಗ್ಲೆಂಡ್ ತಂಡವು 45 ರನ್‍ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.

1882ರಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತು. ಆ ಸಂದರ್ಭದಲ್ಲಿ ಲಂಡನ್‍ನ ಓವಲ್‍ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 7 ರನ್‍ಗಳ ಗೆಲುವು ಸಾಧಿಸಿತು. ಆಗ ದಿ ಸ್ಪೋರ್ಟಿಂಗ್ ಟೈಮ್ಸ್ ಪತ್ರಿಕೆ 1882ರ ಆಗಸ್ಟ್ 29 ರಂದು ಇಂಗ್ಲಿಷ್ ಕ್ರಿಕೆಟ್‍ನ ದೇಹಾಂತ್ಯವಾಗಿದೆ. ಮೃತದೇಹದ ಅಂತ್ಯಕ್ರಿಯೆ ನಡೆಯಲಿದ್ದು, ನಂತರ ಬೂದಿಯನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗುವುದು ಎಂಬ ಪ್ರಕಟಣೆಯನ್ನು ಅಚ್ಚು ಮಾಡಿತು. 1883ರ ಚಳಿಗಾಲದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪ್ರವಾಸಿ ತಂಡವು ಮೂರರಲ್ಲಿ ಎರಡು ಟೆಸ್ಟ್ ಗೆದ್ದು ಸರಣಿ ತನ್ನದಾಗಿಸಿಕೊಂಡಿತು. ಮೆಲ್ಬರ್ನ್‍ನಲ್ಲಿ ಕೆಲವು ಮಹಿಳೆಯರು ಸಣ್ಣ ಕರಂಡಕವೊಂದರಲ್ಲಿ ಬೂದಿಯನ್ನು ಹಾಕಿ ಇಂಗ್ಲೆಂಡ್ ತಂಡದ ನಾಯಕನಿಗೆ ನೀಡಿದರು. ಇದರಿಂದಾಗಿ ಇಂಗ್ಲೆಂಡ್- ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಆಷಸ್ ಎಂಬ ಹೆಸರು ಚಿರಸ್ಥಾಯಿಯಾಯಿತು. ಆ ಬೂದಿ ತುಂಬಿದ ಕರಂಡಕ ಈಗಲೂ ಲಾಡ್ರ್ಸ್ ಮೈದಾನದಲ್ಲಿನ ಎಂಸಿಸಿ ವಸ್ತುಸಂಗ್ರಹಾಲಯದಲ್ಲಿ ಭದ್ರವಾಗಿದೆ.

ಕ್ರಮೇಣ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟವು. ನಂತರದ ದಿನಗಳಲ್ಲಿ ರಾಜಕೀಯ ಕಾರಣಗಳಿಂದ ದಕ್ಷಿಣ ಆಫ್ರಿಕಾವನ್ನು ಕ್ರಿಕೆಟ್ ಜಗತ್ತಿನಿಂದ ಹೊರತಳ್ಳಲಾಯಿತು. ಕೊನೆಗೆ ಎಂಬತ್ತರದ ದಶಕದಲ್ಲಿ ಮತ್ತೆ ದಕ್ಷಿಣ ಆಫ್ರಿಕಾಗೆ ಐಸಿಸಿಯಲ್ಲಿ ಸ್ಥಾನ ನೀಡುವ ಮೂಲಕ ಮರಳಿ ಆಡುವ ಅವಕಾಶ ನೀಡಲಾಯಿತು.
ಆರಂಭದಲ್ಲಿ ಆಷಸ್ ಸರಣಿಗಳು ಕ್ರಿಕೆಟ್ ಲೋಕದ ಕಣ್ಮಣಿಯಾದರೂ ನಂತರದ ದಿನಗಳಲ್ಲಿ, ಮುಖ್ಯವಾಗಿ 1970 ರಿಂದ 85ರ ನಡುವೆ ವೆಸ್ಟ್ ಇಂಡೀಸ್‍ನ ದೈತ್ಯ ಪಡೆ ಕ್ರಿಕೆಟ್‍ಗೆ ಹೊಸ ಆಯಾಮವನ್ನೇ ನೀಡಿತು.

ಕ್ರಮೇಣ ಇಂಗ್ಲೆಂಡ್ ತಂಡವು ಬಲಹೀನವಾದರೆ ವಿಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಕ್ರಿಕೆಟ್ ಜಗತ್ತಿನ ಮೇಲೆ ತಮ್ಮ ಹಿಡಿತ ಸಾಧಿಸಿದವು. ಶ್ರೀಲಂಕಾ ಧುತ್ತೆಂದು ಕ್ರಿಕೆಟ್ ಲೋಕದಲ್ಲಿ ಮಿಂಚಿತು. ಈ ನಡುವೆ ಜಿಂಬಾಬ್ವೆ ಹಾಗೂ ಬಾಂಗ್ಲಾದೇಶದಂತಹ ಶಕ್ತಿಹೀನ ತಂಡಗಳಿಗೆ ಕೂಡ ಟೆಸ್ಟ್ ಆಡುವ ಅವಕಾಶ ದೊರಕಿತು. ಇಂತಹ ಬಲಾಢ್ಯರು ಮತ್ತು ಬಲಹೀನರ ನಡುವೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಗಾಗ ಮಿಂಚಿದ್ದು ಕೂಡ ಇದೆ.

ಆದರೆ, ಕ್ರಿಕೆಟ್ ಲೋಕದ ಚಿತ್ರವೇ ಬದಲಾಗಿದ್ದು 1971ರ ಜನವರಿ 5ರಂದು. ಮೆಲ್ಬರ್ನ್‍ನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆ ದಿನ ನಡೆದ ಆಸ್ಟ್ರೇಲಿಯಾ- ಇಂಗ್ಲೆಂಡ್ ನಡುವಿನ ಪ್ರಪ್ರಥಮ ಏಕದಿನ ಅಂತರರಾಷ್ಟ್ರೀಯ ಪಂದ್ಯ ಹೊಸದೊಂದು ಕ್ರಾಂತಿಗೆ ನಾಂದಿ ಹಾಡಿತು. ಅದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಎಂದರೆ ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯಗಳು ಮಾತ್ರ ಆಗಿದ್ದವು. ನಿಧಾನಗತಿಯ ಪರಿಣಾಮವಾಗಿ ಟೆಸ್ಟ್ ಪಂದ್ಯಗಳು ಜನಪ್ರಿಯತೆ ಕಳೆದುಕೊಂಡ ಸಂದರ್ಭದಲ್ಲಿ ಉಗಮವಾದ ಏಕದಿನ ಪಂದ್ಯಗಳು ಕ್ರಿಕೆಟ್ ಪ್ರೇಮಿಗಳ ಸಂಖ್ಯೆಯನ್ನು ಹೆಚ್ಚಿಸಿದವು ಮಾತ್ರವಲ್ಲ ಸಂಪರ್ಕ ಮಾಧ್ಯಮ ಕ್ರಾಂತಿಯ ಫಲವಾಗಿ ಜಗತ್ತಿನಾದ್ಯಂತ ಕ್ರಿಕೆಟ್ ಮತ್ತಷ್ಟು ಜನಪ್ರಿಯವಾಗುವಂತೆ ಮಾಡಿದವು.

ಸುಮಾರು 12 ವರ್ಷಗಳಷ್ಟು ಕಾಲ ವಿಕಸನದ ಹಾದಿಯಲ್ಲಿ ಮುನ್ನಡೆದ ಏಕದಿನ ಕ್ರಿಕೆಟ್‍ಗೆ ಜಾಗತಿಕ ರೂಪ ದೊರಕಿದ್ದು 1975ರಲ್ಲಿ, ಇಂಗ್ಲೆಂಡ್‍ನಲ್ಲಿ ಮೊದಲ ವಿಶ್ವಕಪ್ ಕ್ರಿಕೆಟ್‍ನಿಂದ. ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಮೊದಲ ವಿಶ್ವಕಪ್ ಮಾತ್ರವಲ್ಲ 1979ರಲ್ಲಿ ದೊರೆಗಳ ನಾಡಿನಲ್ಲಿಯೇ ನಡೆದ ಎರಡನೇ ವಿಶ್ವಕಪ್ ಅನ್ನೂ ಗೆದ್ದು ವಿಜೃಂಭಿಸಿತು.

1983ರಲ್ಲಿ ಇಂಗ್ಲೆಂಡ್‍ನಲ್ಲಿಯೇ ನಡೆದ ಮೂರನೇ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡವು ಪ್ರಶಸ್ತಿ ಗೆದ್ದು ಜಗತ್ತೇ ನಿಬ್ಬೆರಗಾಗುವಂತೆ ಮಾಡಿತು. ಆ ಮೂಲಕ ಭಾರತದಲ್ಲಿ ಕ್ರಿಕೆಟ್ ವಿಶ್ವವ್ಯಾಪಿಯಾಯಿತು. ಕ್ರಿಕೆಟ್ ಒಂದು ಧರ್ಮವಾಗಿ ಪರಿವರ್ತನೆಗೊಂಡಿತು. ಅಷ್ಟರವರೆಗೆ ಕೇವಲ ಆಟಗಾರರಾಗಿದ್ದವರು ನಂತರದ ದಿನಗಳಲ್ಲಿ ತಾರೆಗಳಾಗಿ ಹೊಳೆದರು.

1987ರಲ್ಲಿ ಭಾರತದಲ್ಲಿ ನಡೆದ ರಿಲೆಯನ್ಸ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‍ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾದವು. ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ನಡೆದ ಆ ಫೈನಲ್‍ನಲ್ಲಿ ಏಳು ರನ್‍ಗಳ ಅಂತರದಲ್ಲಿ ಜಯಗಳಿಸಿದ ಅಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಂiÀi ಪ್ರಶಸ್ತಿ ಗೆದ್ದಿತು. ಮೈಕ್ ಗ್ಯಾಟಿಂಗ್ ನೇತೃತ್ವದ ಇಂಗ್ಲೆಂಡ್‍ಗೆ ಮುಖಭಂಗವಾಯಿತು.

1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಜಸ್ ವಿಶ್ವಕಪ್ ಗೆದ್ದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ ಕ್ರಿಕೆಟ್ ಲೋಕದ ನೂತನ ಶಕ್ತಿಯಾಗಿ ಉದಯಿಸಿತು. 1996ರಲ್ಲಿ ಭಾರತ ಉಪಖಂಡದಲ್ಲಿ ನಡೆದ ವಿಲ್ಸ್ ವಿಶ್ವಕಪ್‍ನಲ್ಲಿ ಅರ್ಜುನ ರಣತುಂಗಾ ನೇತೃತ್ವದ ಶ್ರೀಲಂಕಾ ತಂಡ ಪ್ರಶಸ್ತಿ ಗೆದ್ದಿತು.

1999ರಲ್ಲಿ ಇಂಗ್ಲೆಂಡ್ ಹಾಗೂ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕೊನೆಯ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯ ತಂಡವು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಲೋಕದ ಅನಭಿಷಿಕ್ತ ದೊರೆ ನಾನೇ ಎಂದು ಸಾರಿ ಹೇಳಿದೆ.

ಅಲನ್ ಬಾರ್ಡರ್, ಸ್ಟೀವ್ ವಾ ಹಾಗೂ ಈಗ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಮಣಿಸಲಾಗದ ಶಕ್ತಿಯಾಗಿ ಬೆಳೆದು ನಿಂತಿರುವ ಆಸ್ಟ್ರೇಲಿಯ ನಿಸ್ಸಂದೇಹವಾಗಿ ಕ್ರಿಕೆಟ್ ಲೋಕದ ದೊರೆಯೇ ಸರಿ. ಸದ್ಯ ಆಸ್ಟ್ರೇಲಿಯಾದಷ್ಟು ವೃತ್ತಿಪರವಾಗಿ ಕ್ರಿಕೆಟ್ ಆಡುವ ಹಾಗೂ ಸದಾ ಗೆಲುವಿನ ಹಾದಿಯಲ್ಲಿ ಮುನ್ನುಗ್ಗುವ ಮತ್ತೊಂದು ತಂಡ ವಿಶ್ವದಲ್ಲಿ ಇಲ್ಲ.

ಭಾರತದಲ್ಲಿ ಕ್ರಿಕೆಟ್:

ಭಾರತ ತಂಡ ತನ್ನ ಪ್ರಥಮ ಟೆಸ್ಟ್ ಪಂದ್ಯ ಆಡಿದ್ದು 1932ರಲ್ಲಿ. ಸಿ.ಕೆ.ನಾಯ್ಡು ನೇತೃತ್ವದ ತಂಡವು ಇಂಗ್ಲೆಂಡ್ ವಿರುದ್ಧ ಜೂನ್ 25ರಂದು ಲಾಡ್ರ್ಸ್‍ನಲ್ಲಿ ಟೆಸ್ಟ್ ಪಂದ್ಯವಾಡುವ ಮೂಲಕ ಭಾರತ ಕ್ರಿಕೆಟ್ ಲೋಕದಲ್ಲಿ ಹೊಸದೊಂದು ಯುಗ ಆರಂಭವಾಯಿತು. ಆ ಯುಗ ಆರಂಭವಾಗುವ ಮೊದಲೇ 218 ಟೆಸ್ಟ್ ಪಂದ್ಯಗಳು ಆಗಿ ಹೋಗಿದ್ದವು.

ಇತಿಹಾಸದ ಪುಟಗಳನ್ನು ತಿರುವಿದರೆ 1721ರಲ್ಲಿಯೇ ಭಾರತದಲ್ಲಿ ಕ್ರಿಕೆಟ್ ಪಂದ್ಯ ನಡೆದ ಕುರುಹುಗಳು ಸಿಗುತ್ತವೆ. ಆ ದಿನದಿಂದ ಅಧಿಕೃತ ಟೆಸ್ಟ್ ಆಡಲು ಭಾರತಕ್ಕೆ 211 ವರ್ಷಗಳಷ್ಟು ದೀರ್ಘ ಕಾಲ ಬೇಕಾಯಿತು. ಇದು ಏಕೆ ಎನ್ನುವ ಉತ್ತರ ಹುಡುಕಿದರೆ ಹಲವಾರು ರಾಜಕೀಯ ಹಾಗೂ ಸಾಮಾಜಿಕ ಕಾರಣಗಳು ಕಣ್ಣಿಗೆ ಬೀಳುತ್ತವೆ.

ಕಲ್ಕತ್ತ ಕ್ರಿಕೆಟ್ ಕ್ಲಬ್ ಮತ್ತು ಬ್ಯಾರಕ್‍ಪುರ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೆ 1792ರಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆದ ಬಗ್ಗೆ ಉಲ್ಲೇಖವಿದೆ. ಆದರೆ, ಆ ಎರಡೂ ತಂಡಗಳಲ್ಲಿ ಬ್ರಿಟಿಷ್ ಆಟಗಾರರೇ ಅಧಿಕ ಸಂಖ್ಯೆಯಲ್ಲಿ ಇದ್ದುದಾಗಿ ಕೂಡ ತಿಳಿದು ಬರುತ್ತದೆ. ಕ್ರಿಕೆಟ್ ಭಾರತಕ್ಕೆ ಕಾಲಿಟ್ಟ ಮೊದಲ ದಿನಗಳಲ್ಲಿ ಬಿಳಿಯರಿಗೆ ಮಾತ್ರ ಆ ಆಟವನ್ನು ಆಡುವ ಅವಕಾಶ ಇರುತ್ತಿತ್ತು,

ಕ್ರಿಕೆಟ್‍ನ ಬೈಬಲ್ ವಿಸ್ಡನ್ ಪ್ರಕಾರ 1840ರ ನಂತರ ಭಾರತೀಯರು ಕ್ರಿಕೆಟ್ ಆಡಲು ಆರಂಭಿಸಿದ್ದು. ಆ ದಶಕದ ಮದ್ಯಭಾಗದಲ್ಲಿ ಪಾರ್ಸಿ ಕ್ರಿಕೆಟ್ ಭಾರತದಲ್ಲಿ ನೆಲೆ ಕಂಡಿತು. ಈಗಿನ ಕೋಲ್ಕತ್ತ ಮತ್ತು ಮುಂಬೈಗಳಲ್ಲಿ ಮಾತ್ರ ವ್ಯವಸ್ಥಿತವಾಗಿ ಕ್ರಿಕೆಟ್ ಪಂದ್ಯಗಳು ನಡೆದವು. 1850ರಲ್ಲಿ ಮದ್ರಾಸ್ ಕ್ರಿಕೆಟ್ ಕ್ಲಬ್ ಸ್ಥಾಪನೆಯಾಯಿತು. ಅದರೊಂದಿಗೆ ದಕ್ಷಿಣ ಭಾರತದಲ್ಲಿ ಕ್ರಿಕೆಟ್ ಜ್ವರ ಹರಡಲಾರಂಭಿಸಿತು.

1886ರಲ್ಲಿ ಡಾ. ಡಿ.ಎಚ್.ಪಟೇಲ್ ನಾಯಕತ್ವ ವಹಿಸಿದ್ದ ಪಾರ್ಸಿ ತಂಡವೊಂದು ಇಂಗ್ಲೆಂಡ್ ಪ್ರವಾಸ ಕೈಗೊಂಡಿತು. ಪ್ರಥಮ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡ ಭಾರತದ ಅಧಿಕೃತ ಕ್ರಿಕೆಟ್ ತಂಡ ಇದು. 1886 ಮತ್ತು 1888 ರಲ್ಲಿ ಕೂಡ ಪಾರ್ಸಿ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತು.

ಈ ನಡುವೆ ಭಾರತೀಯ ರಾಜಮನೆತನಗಳನ್ನು ಕ್ರಿಕೆಟ್ ಆಕರ್ಷಿಸಿತು. ಪಾಟಿಯಾಲದ ಮಹಾರಾಜ ರಾಜೇಂದ್ರ ಸಿಂಗ್ 1890ರ ಹೊತ್ತಿಗೆ ಕ್ರಿಕೆಟ್‍ನ ಅಭಿವೃದ್ಧಿಗೆ ಪ್ರಯತ್ನ ಮಾಡಿದರು. ಅವರು ಕಟ್ಟಿದ ತಂಡದಲ್ಲಿ ರಣಜಿತ್ ಸಿನ್ಹಜಿ ಇದ್ದರು. ಅವರ ನೆನಪಿನಲ್ಲಿಯೇ ಈಗ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯುತ್ತಿರುವುದು.

ಆರಂಭದ ದಿನಗಳಲ್ಲಿ ಪಾರ್ಸಿ ತಂಡ ಮಾತ್ರ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿದ್ದರೆ ನಂತರದ ದಿನಗಳಲ್ಲಿ ಹಿಂದೂ ಆಟಗಾರರು ಕೂಡ ಈ ಆಟವನ್ನೂ ನಾವು ಆಡಬಹುದು ಎಂಬ ಭಾವನೆ ತಳೆದರು. ಆದರೆ, ಹಿಂದೂ ಸಮಾಜದಲ್ಲಿನ ಜಾತೀಯತೆ, ಮೇಲು-ಕೀಳು ಭಾವನೆ ಕ್ರಿಕೆಟ್‍ನ ಮೇಲೆ ಕೂಡ ಸಾಕಷ್ಟು ಪರಿಣಾಮ ಬೀರಿದ ಉದಾಹರಣೆಗಳಿವೆ.

ಇಂತಹ ಏಳುಬೀಳುಗಳ ನಡುವೆಯೇ 1928ರಲ್ಲಿ ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಸ್ತಿತ್ವಕ್ಕೆ ಬಂತು. ಕೊನೆಗೆ ಪಾಟಿಯಾಲಾದ ಮಹಾರಾಜ ಹಾಗೂ ಮಹಾರಾಜ ವಿಜಿ ಅವರ ಪ್ರಯತ್ನದ ಫಲವಾಗಿ ಸಿ.ಕೆ.ನಾಯ್ಡು ನೇತೃತ್ವದ ಭಾರತ ತಂಡವು 1932ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತು. 1933-34 ರಲ್ಲಿ ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಕೈಗೊಂಡು ಮೂರು ಟೆಸ್ಟ್ ಪಂದ್ಯಗಳನ್ನು ಆಡಿತು. ಆ ಸರಣಿಯಲ್ಲಿಯೇ ಲಾಲಾ ಅಮರನಾಥ್ ಭಾರತದ ಪರ ಮೊದಲ ಟೆಸ್ಟ್ ಶತಕ ಬಾರಿಸಿದ ಸಾಧನೆ ಮಾಡಿದರು. ಆರಂಭದ ದಶಕದಲ್ಲಿ ಸಿ.ಕೆ.ನಾಯ್ಡು, ಅಮರ್ ಸಿಂಗ್, ಮಹಮದ್ ನಿಸ್ಸಾರ್, ಲಾಲಾ ಅಮರನಾಥ್, ವಿಜಯ್ ಮರ್ಚೆಂಟ್, ಮುಷ್ತಾಕ್ ಅಲಿ... ಅವರಂತಹ ಪ್ರತಿಭಾವಂತ ಆಟಗಾರರು ಭಾರತ ತಂಡದ ಸಾಮಥ್ರ್ಯವಾಗಿದ್ದರು.

1952ರವರೆಗೆ ಭಾರತ ತಂಡವು ಒಟ್ಟು ಆಡಿದ ಟೆಸ್ಟ್‍ಗಳ ಸಂಖ್ಯೆ 24. ಆ ಪೈಕಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಲು ಆಗಲಿಲ್ಲ. ಕೊನೆಗೂ ಆ ಸುದಿನ ಬಂದದ್ದು 1952ರ ಫೆಬ್ರುವರಿ 10ರಂದು ಮದ್ರಾಸ್‍ನ ಚಿಪಾಕ್ ಕ್ರೀಡಾಂಗಣದಲ್ಲಿ. ಇಂಗ್ಲೆಂಡ್ ವಿರುದ್ಧ ನಡೆದ ಆ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 8 ರನ್‍ಗಳ ಅಂತರದ ಭಾರಿ ಗೆಲುವು ಸಾಧಿಸಿತು. ಪಾಲಿ ಉಮ್ರಿಗರ್ ಹಾಗೂ ಪಂಕಜ್ ರಾಯ್ ಅವರ ಅಮೋಘ ಶತಕಗಳು ಮತ್ತು ಎಂ.ಎಚ್.ಮಂಕಡ್ ಹಾಗೂ ಗುಲಾಂ ಅಹಮದ್ ಅವರ ಶ್ರೇಷ್ಠ ಮಟ್ಟದ ಸ್ಪಿನ್ ಬೌಲಿಂಗ್ ಭಾರತದ 20 ವರ್ಷಗಳಷ್ಟು ದೀರ್ಘ ಕಾಲದ ಗೆಲುವಿನ ಹಸಿವನ್ನು ಸ್ವಲ್ಪ ಮಟ್ಟಿಗೆ ಇಂಗಿಸಿತು.

ಆದರೆ, ವಿದೇಶದಲ್ಲಿ ಭಾರತ ತಂಡ ಟೆಸ್ಟ್ ಪಂದ್ಯ ಗೆಲ್ಲಲು ಮತ್ತೆ ಸುಮಾರು 19 ವರ್ಷಗಳಷ್ಟು ದೀರ್ಘ ಕಾಲ ಕಾಯಬೇಕಾಯಿತು. ಲಂಡನ್‍ನ ಕೆನ್ಸಿಂಗ್ಟನ್ ಓವಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್‍ನಲ್ಲಿ ಭಾರತ ನಾಲ್ಕು ವಿಕೆಟ್‍ಗಳ ಅಂತರದ ಜಯ ಸಾಧಿಸಿ ಇತಿಹಾಸ ನಿರ್ಮಿಸಿತು. ಆ ಹಿಂದೆ ಆಡಿದ್ದ 26 ಟೆಸ್ಟ್‍ಗಳಲ್ಲಿ ಸೋಲನ್ನೇ ಅನುಭವಿಸದಿದ್ದ ಇಂಗ್ಲೆಂಡ್ ತಂಡಕ್ಕೆ ಅದರ ನೆಲದಲ್ಲಿಯೇ ಭಾರತ ಆಘಾತ ನೀಡಲು ಮುಖ್ಯ ಕಾರಣವಾಗಿದ್ದು ಕರ್ನಾಟಕದ ಲೆಗ್ ಸ್ಪಿನ್ನರ್ ಬಿ.ಎಸ್.ಚಂದ್ರಶೇಖರ್. ಇಂಗ್ಲೆಂಡ್‍ನ ಎರಡನೇ ಇನಿಂಗ್ಸ್‍ನಲ್ಲಿ 38 ರನ್‍ಗಳಿಗೆ 6 ವಿಕೆಟ್ ಪಡೆದ ಚಂದ್ರಶೇಖರ್ ಕ್ರಿಕೆಟ್ ದೊರೆಗಳ ಮುಖಕ್ಕೆ ಮಸಿ ಬಳಿಯುವಲ್ಲಿ ಮಹತ್ವದ ಪಾತ್ರ ವಹಿಸಿದರು. 1973ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್‍ನಲ್ಲಿ ಬಿ.ಎಸ್.ಚಂದ್ರಶೇಖರ್ ಹಾಗೂ ಬಿಷನ್‍ಸಿಂಗ್ ಬೇಡಿ ಅವರ ಅಮೋಘ ಸ್ಪಿನ್ ದಾಳಿಯ ನೆರವಿನಿಂದ ಭಾರತ 28 ರನ್‍ಗಳ ರೋಮಾಂಚಕ ಗೆಲುವು ಸಾಧಿಸಿತು.

ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಮಹತ್ವದ ಸಾಧನೆಗಳಲ್ಲಿಯೇ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿರುವುದು 1976ರ ಏಪ್ರಿಲ್ 12ರಂದು ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‍ನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಸಾಧಿಸಿದ ಗೆಲುವು. ಆ ಪಂದ್ಯ ಗೆಲ್ಲಲು ಉಳಿದ ಒಂದೂವರೆ ದಿನಗಳಲ್ಲಿ ಭಾರತ ತನ್ನ ಎರಡನೇ ಇನಿಂಗ್ಸ್‍ನಲ್ಲಿ 403 ರನ್‍ಗಳಿಸಬೇಕಾಗಿತ್ತು. ಆದರೆ, ಅಂದಿನವರೆಗಿನ 99 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡವು ನಾಲ್ಕನೇ ಇನಿಂಗ್ಸ್‍ನಲ್ಲಿ ನಾನೂರಕ್ಕಿಂತ ಹೆಚ್ಚು ರನ್‍ಗಳನ್ನು ಗಳಿಸಿ ಪಂದ್ಯ ಗೆದ್ದ ಉದಾಹರಣೆ ಇರಲಿಲ್ಲ. ಗುಂಡಪ್ಪ ವಿಶ್ವನಾಥ್, ಸುನೀಲ್ ಗಾವಸ್ಕರ್ ಹಾಗೂ ಮೊಹಿಂದರ್ ಅಮರನಾಥ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ 4 ವಿಕೆಟ್‍ಗಳ ನಷ್ಟಕ್ಕೆ 406 ರನ್‍ಗಳಿಸಿ ಪಂದ್ಯ ಗೆದ್ದು ವಿಶ್ವ ದಾಖಲೆ ಮಾಡಿತು.

ಇದಾದ ನಂತರ ಭಾರತದ ಕ್ರಿಕೆಟ್‍ನಲ್ಲಿ ಸುನೀಲ್ ಗಾವಸ್ಕರ್ ಹಾಗೂ ಕಪಿಲ್ ದೇವ್ ಅವರ ಯುಗ ಆರಂಭವಾಯಿತು. ಆ ಪೈಕಿ ಗಾವಸ್ಕರ್ ಟೆಸ್ಟ್ ಕ್ರಿಕೆಟ್‍ನಲ್ಲಿ 34 ಶತಕ ಹಾಗೂ ಹತ್ತು ಸಾವಿರ ರನ್‍ಗಳ ಗಡಿ ದಾಟಿ ದಾಖಲೆ ಬರೆದರು. ಅಲನ್ ಬಾರ್ಡರ್, ಸ್ಟೀವ್ ವಾ, ಬ್ರಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ಕೂಡ ನಂತರದ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಹತ್ತು ಸಾವಿರ ರನ್‍ಗಳ ದಾಟಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು. ಈ ಪೈಕಿ ವೆಸ್ಟ್ ಇಂಡೀಸ್‍ನ ಬ್ರಯಾನ್ ಲಾರಾ ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಔಟಾಗದೇ 400 ರನ್‍ಗಳಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಕಪಿಲ್ ದೇವ್ 434 ಟೆಸ್ಟ್ ವಿಕೆಟ್ ಪಡೆದು ನ್ಯೂಜಿಲೆಂಡ್‍ನ ವೇಗದ ಬೌಲರ್ ರಿಚರ್ಡ್ ಹ್ಯಾಡ್ಲಿ ಅವರ ಸಾಧನೆಯನ್ನು ದಾಟಿ ನಿಂತು ವಿಶ್ವ ದಾಖಲೆ ಬರೆದರು. ನಂತರ ವೆಸ್ಟ್ ಇಂಡೀಸ್‍ನ ಕೋಟ್ರ್ನಿ ವಾಲ್ಷ್ ಅವರು ಕಪಿಲ್ ದಾಖಲೆ ಅಳಿಸಿದರು. ಅದಾದ ಮೇಲೆ ಆಸ್ಟ್ರೇಲಿಯಾದ ಶೇನ್ ವಾರ್ನ್, ಗ್ಲೆನ್ ಮೆಕ್‍ಗ್ರಾ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಕಪಿಲ್ ದಾಖಲೆ ಮುರಿದು ಮುಂದಡಿಯಿಟ್ಟರು. ಇತ್ತೀಚೆಗೆ ಕರ್ನಾಟಕದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಕಪಿಲ್‍ದೇವ್ ದಾಖಲೆಯನ್ನು ಮುರಿದು ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಗಾವಸ್ಕರ್-ಕಪಿಲ್ ಯುಗದಲ್ಲಿ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ಸಾಕಷ್ಟು ವೈಯಕ್ತಿಕ ಸಾಧನೆಗಳು ಆಗಿದ್ದರೂ, ಒಂದು ತಂಡವಾಗಿ ಭಾರತ ಮೇರು ಪ್ರದರ್ಶನ ನೀಡುವಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಸಾಧಿಸಲಿಲ್ಲ.
ನಂತರ ಮಹಮದ್ ಅಜರುದ್ದೀನ್ ದೀರ್ಘ ಕಾಲ ಭಾರತ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ಕೂಡ ಆಗಾಗ ಮಿಂಚು ಹರಿದಿದ್ದನ್ನು ಬಿಟ್ಟರೆ ಒಂದೇ ಮಟ್ಟದ ಪ್ರದರ್ಶನ ನೀಡುವಲ್ಲಿ ಭಾರತ ತಂಡವು ವಿಫಲವಾಯಿತು.

ನಂತರ ಸಚಿನ್ ತೆಂಡೂಲ್ಕರ್ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡು, ನಡುವೆಯೇ ಆ ಸ್ಥಾನ ತ್ಯಜಿಸಿದರು. ಅದಾದ ಮೇಲೆ ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾರತ ತಂಡವು ಇದ್ದುದರಲ್ಲಿಯೇ ಸ್ವಲ್ಪ ಮಟ್ಟಿಗೆ ಉತ್ತಮ ಸಾಧನೆ ಮಾಡುತ್ತಿದೆ.

2005ರ ಮಾರ್ಚ್‍ವರೆಗಿನ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಕಳೆದ ಬಾರಿ ಕೈಗೊಂಡ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪ್ರವಾಸದಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ಹೇಳಲು ಅಡ್ಡಿಯಿಲ್ಲ.

ಅದರಲ್ಲಿಯಂತೂ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‍ನಲ್ಲಿ ಹಾಗೂ ಪಾಕಿಸ್ತಾನದ ವಿರುದ್ಧ ಮುಲ್ತಾನ್‍ನಲ್ಲಿ ನಡೆದ ಟೆಸ್ಟ್‍ಗಳಲ್ಲಿ ಭಾರತ ಗಳಿಸಿದ ಜಯ ಚರಿತ್ರಾರ್ಹವಾದುದು.
ಇದುವರೆಗೆ ಕೇವಲ ಒಂದೋ ಎರಡೋ ವೈಯಕ್ತಿಕ ಪ್ರತಿಭೆಗಳನ್ನು ಹೊಂದಿರುತ್ತಿದ್ದ ಭಾರತ ತಂಡದಲ್ಲಿ ಈಗ ನಾಯಕ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್ ಹಾಗೂ ವಿರೇಂದ್ರ ಸೆಹ್ವಾಗ್ ಅವರಂತಹ ಶ್ರೇಷ್ಠ ಮಟ್ಟದ ಬ್ಯಾಟ್ಸ್‍ಮನ್‍ಗಳಿದ್ದಾರೆ.

ಸದ್ಯ ಬಿ.ಎಸ್.ಚಂದ್ರಶೇಖರ್, ಬಿಷನ್‍ಸಿಂಗ್ ಬೇಡಿ, ಇ.ಎ.ಎಸ್.ಪ್ರಸನ್ನ ಹಾಗೂ ಎಸ್.ವೆಂಕಟರಾಘವನ್ ಅವರನ್ನು ಒಳಗೊಂಡ ಪ್ರಬಲವಾದ ಸ್ಪಿನ್ ಪಡೆ ತಂಡದಲ್ಲಿ ಇಲ್ಲ. ಆದರೂ, ಅನಿಲ್ ಕುಂಬ್ಳೆ ಹಾಗೂ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಎಂತಹ ಎದುರಾಳಿಗಳನ್ನೂ ಕಟ್ಟಿ ಹಾಕುವ ಸಾಮಥ್ರ್ಯ ಹೊಂದಿದ್ದಾರೆ. ಇನ್ನು ಇರ್ಫಾನ್ ಪಠಾಣ್, ಲಕ್ಷ್ಮೀಪತಿ ಬಾಲಾಜಿ, ಜಹೀರ್‍ಖಾನ್ ಹಾಗೂ ಆಶೀಶ್ ನೆಹ್ರ ಅವರನ್ನು ಒಳಗೊಂಡ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಹೊಸ ರಕ್ತ ಹರಿಯುತ್ತಿದೆ. ಒಟ್ಟಾರೆ 1983ರ ಕಪಿಲ್ ಡೆವಿಲ್ಸ್ ಆಗಿ ಮರುಹುಟ್ಟು ಪಡೆಯುವ ಅವಕಾಶ ಗಂಗೂಲಿ ಪಡೆಗೆ ಇದೆ. ಆದರೆ, ಗಂಗೂಲಿ ಪಡೆ ಆ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕು.

ವಿಶ್ವದ ಪ್ರಸಿದ್ಧ ಆಟಗಾರರು:
ಇಂಗ್ಲೆಂಡ್
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
ನ್ಯೂಜಿಲೆಂಡ್
ವೆಸ್ಟ್ ಇಂಡೀಸ್
ಭಾರತ
ಪಾಕಿಸ್ತಾನ
ಶ್ರೀಲಂಕಾ
ಜಿಂಬಾಬ್ವೆ
ಬಾಂಗ್ಲಾದೇಶ
ಪರಿಷ್ಕರಣೆ
ಸತೀಶ್ ಚಪ್ಪರಿಕೆ
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ